ಪ್ರಕಾಶಾವಧಿಪ್ರಭಾವ  - 
ಬೆಳಕು ಮತ್ತು ಕತ್ತಲೆಯ ದೈನಿಕ, ಶ್ರಾಯಿಕ ಅಥವಾ ವಾರ್ಷಿಕ ಅವಧಿಯ ಬದಲಾವಣೆಗಳಿಗೆ ಯಾವುದೇ ಜೀವಿ ತೋರುವ ಕ್ರಿಯಾಪೂರ್ಣ ಅಥವಾ ವರ್ತನಾ ಪ್ರತಿಸ್ಪಂದನ (ಫೋಟೋಪೀರಿಯಾಡಿಸಮ್) ಪ್ರಕಾಶವಾದಿ ಪ್ರಭಾವದ ಸಾಮಾನ್ಯ ಉದಾಹರಣೆಗಳೆಂದರೆ ಸಸ್ಯಗಳ ಹೂಬಿಡುವಿಕೆ, ಪ್ರಾಣಿಗಳ ಸಂಭೋಗ, ಹಕ್ಕಿಗಳ ವಲಸೆ. ಇಂಥ ಕ್ರಿಯೆಗಳು ಅನುವಂಶಿಕವಾಗಿ ನಿರ್ಧರಿತವಾಗಿದ್ದರೂ ಉಷ್ಣತೆ, ಆಹಾರ ಪೋಷಣೆ ಹಾಗೂ ಪರಿಸರದ ಇತರ ಅಂಶಗಳೂ ಇವುಗಳ ಮೇಲೆ ಪ್ರಭಾವ ಬೀರುತ್ತವೆ.

	ಸಸ್ಯಗಳಲ್ಲಿ : ಪ್ರಕಾಶಾವಧಿ ಪ್ರಭಾವ ವಿದ್ಯಮಾನ ಮೊದಲು ಗಮನಕ್ಕೆ ಬಂದದ್ದು 1920ರಲಿ.್ಲ ಕೆಲವು ಸಸ್ಯಗಳ ಹೂ ಬಿಡಿವಿಕೆಯನ್ನು ಬೆಳಕಿನ ದೈನಿಕ ಅವಧಿ ನಿಯಂತ್ರಿಸುತ್ತದೆ ಎನ್ನುವುದು ಪ್ರಯೋಗದ ಮೂಲಕ ಸ್ಪಷ್ಟವಾಯಿತು. ಹೂ ಬಿಡುವಿಕೆಗೆ ಅನುಕೂಲವಾದ ಹಗಲಿನ ಅವಧಿಯ ಆಧಾರದ ಮೇಲೆ ಮೂರು ಬಗೆಯ ಸಸ್ಯಗಳಿವೆ ಎಂದು ಪತ್ತೆ ಹಚ್ಚಲಾಗಿದೆ. ಕಿರು ಹಗಲ ಸಸ್ಯಗಳು ಹಗಲಿನ ಅವಧಿ ಉದ್ದವಾದರೆ ಹೂ ಬಿಡುವುದಿಲ್ಲ. ನೀಳ ಹಗಲ ಸಸ್ಯಗಳು ಹಗಲಿನ ಅವಧಿ ನಿರ್ದಿóಷ್ಟವಾದುದಕ್ಕಿಂತ ಉದ್ದವಾಗದಿದ್ದರೆ ಹೂ ಬಿಡುವುದಿಲ್ಲ. ಅನಿರ್ದಿಷ್ಟ ಸಸ್ಯಗಳು ಹಗಲಿನ ಅವಧಿ ಎಂತೇ ಇರಲಿ ಹೂ ಬಿಡುತ್ತವೆ. ಆವಧಿಕ ಹಗಲಿನ ಉದ್ದ ಸಸ್ಯದಿಂದ ಸಸ್ಯಕ್ಕೆ ಪ್ರಭೇದದಿಂದ ಪ್ರಭೇದಕ್ಕೆ ಭಿನ್ನವಾಗುತ್ತವೆ.
 
	ಪ್ರಕಾಶಾವಧಿಯಿಂದ ಪ್ರಭಾವಿತವಾಗುವ ಇನ್ನಿತರ ಪ್ರತಿಸ್ಪಂದನಗಳೆಂದರೆ, ಪತ್ರ ಕಂದ, ಗೆಡ್ಡೆ ಹಾಗೂ ರನ್ನರ್‍ಗಳ ರೂಪು ತಾಳುವಿಕೆ, ಕಾಂಡ ಹಾಗೂ ಎಲೆಗಳಿಗೆ ಬಣ್ಣ ಬರುವಿಕೆ, ಎಲೆಗಳ ಉದುರುವಿಕೆ ಮತ್ತು ಕೆಲವು ಅಂಗರಚನಾ ಲಕ್ಷಣಗಳ ಬೆಳೆವಣಿಗೆ.

	ಸಸ್ಯಗಳ ಪ್ರಕಾಶಾವಧಿ ಪ್ರತಿಸ್ಪಂದನ ವಾಸ್ತವವಾಗಿ ಕತ್ತಲೆಯ ಅವಧಿಯ ಮೇಲೆ ಅವಲಂಬಿತವಾಗಿದೆಯೇ ಹೊರತು ಬೆಳಕಿನ ಅವಧಿಯ ಮೇಲಲ್ಲ. ಈ ವಿದ್ಯಮಾನವನ್ನು ಗುರುತಿಸಿದ ಹೊಸದರಲ್ಲಿ ಈ ಅಂಶ ಅರ್ಥವಾಗಿರಲಿಲ್ಲ. ಅಂದರೆ ಕಿರು ಹಗಲ ಸಸ್ಯಗಳು ರಾತ್ರಿಯ ಅವಧಿ ದೀರ್ಘವಾದಾಗ ಹೂ ಬಿಡುತ್ತವೆ : ಬೆಳಕು ಕಡಿಮೆ ಆದರೆ ಅಥವಾ ಇಲ್ಲದೇ ಹೋದರೆ ನೀಳ ಹಗಲ ಸಸ್ಯಗಳು ಹೂ ಬಿಡುತ್ತವೆ. ದೀರ್ಘ ಕತ್ತಲ ಅವಧಿಯ ನಡುವೆ ಕೃತಕ ಬೆಳಕಿನ ಸಂಕ್ಷಿಪ್ತ ಅವಧಿಯನ್ನುಂಟು ಮಾಡಿದರೆ ಆಗ ಎರಡು ಕಿರುಕತ್ತಲ ಅವಧಿಗಳಾಗಿ ನೀಳೆ ಹಗಲ ಸಸ್ಯಗಳ ಹೂ ಬಿಡುವಿಕೆ ಅಧಿಕವಾಗುತ್ತದೆ. ಕಿರುಹಗಲ ಸಸ್ಯಗಳ ಹೂ ಬಿಡುವಿಕೆ ಕುಂಠಿತವಾಗುತ್ತದೆ. ಮುಂತಾದ ಸಸ್ಯಗಳ ಹೂ ಬಿಡುವಿಕೆಯ ಕಾಲವನ್ನು ನಿಯಂತ್ರಿಸಲು ಹಗಲಿನ ಅವಧಿಯ ಕೃತಕ ನಿಯಂತ್ರಣ ತಂತ್ರವನ್ನು ಉಪಯೋಗಿಸಲಾಗುವುದು. ಇದರಿಂದ ಯಾವುದೇ ಒಂದು ಋತುವಿಗೆ ಸೀಮಿತವಾಗಿದ್ದ ಹೂಗಳನ್ನು ವರ್ಷದಾದ್ಯಂತ ಪಡೆಯಲು ಸಾಧ್ಯ. ಪ್ರಕಾಶಾವಧಿಯ ಪ್ರತಿಕ್ರಿಯೆಗಳು ನಡೆಯುವುದು ಎಲೆಯಲ್ಲಾದರೂ ಸಾಮಾನ್ಯವಾಗಿ ಪ್ರತಿಸ್ಪಂದನಗಳು ಉಂಟಾಗುವುದು ಬೇರೆ ಕಡೆಗಳಲ್ಲಿ. ಆದ್ದರಿಂದ ಎಲೆಗಳಲ್ಲಿ ಉತ್ಪತ್ತಿಯಾಗುವಂಥ ವಸ್ತು ಬೆಳೆಯುವ ಮೂಲಗಳತ್ತ ಸಾಗಿ ಮೊಗ್ಗಿನ ರೂಪದಳೆಯುವಿಕೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಸ್ಪಷ್ಟ. ಕತ್ತಲೆಯ ಅವಧಿಗಳಲ್ಲಿ ಉತ್ಪನ್ನವಾದ ಪುಷ್ಪ ಪ್ರವರ್ತಕ ಕಾರಕವೇ ಈ ವಸ್ತು. ಇದನ್ನು ವಿಶೇಷ ಪುಷ್ಪಕಾರಕ ಹಾರ್ಮೋನಾದ ಫ್ಲಾರಿಜನ್ ಎನ್ನಬಹುದು.

	ಬೆಳಕಿನ ಘಟಕಗಳಲ್ಲಿ ಕೆಂಪು ಬೆಳಕು, ಕಿರು ಮಹಗಲ ಸಸ್ಯಗಳ ಹೂ ಬಿಡುವಿಕೆಯನ್ನು ಪಡೆಯುವಲ್ಲಿ ಅಥವಾ ನೀಳ ಹಗಲ ಸಸ್ಯಗಳ ಹೂ ಬಿಡುವಿಕೆಯನ್ನು ಹೆಚ್ಚಳಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದನ್ನು ಬಿಟ್ಟರೆ ನೀಲ ಬೆಳಕು ಎರಡು ಬಗೆಯ ಸಸ್ಯಗಳ, ಹೂ ಬಿಡುವಿಕೆಯ ಮೇಲೆಯೂ ಒಂದೇ ಅಲೆಯುದ್ದದ ಬೆಳಕು ಪ್ರಭಾವ ಬೀರುತ್ತದೆ. ಎಂದರೆ ಮೂಲಭೂತ ಪ್ರಕಾಶ - ರಾಸಾಯನಿಕ ಪ್ರತಿಕ್ರಿಯೆಗಳು ಒಂದೇ ಆದರೂ ಕೆಲವು ಸಸ್ಯಗಳಲ್ಲಿ ಹೂ ಬಿಡುವಿಕೆಯನ್ನು ಇದು ತಡೆಗಟ್ಟಿದರೆ ಬೇರೆ ಹಲವು ಸಸ್ಯಗಳಲ್ಲಿ ಅದನ್ನು ಪ್ರವರ್ಧಿಸುತ್ತದೆ.

	ಪ್ರಾಣಿಗಳಲ್ಲಿ : ಪ್ರಾಣಿಗಳಲ್ಲಿಯ ಅತ್ಯಂತ ಸ್ಪಷ್ಟ ಗೋಚರ ಚಟುವಟಿಕೆಗಳು ವರ್ಷದ ಕೆಲವು ಋತುಗಳನ್ನು ಅನುಸರಿಸುತ್ತವೆ. ಹಕ್ಕಿಗಳ ವಲಸೆ, ಪ್ರಜನನ. ರೆಕ್ಕೆ ಪುಕ್ಕಗಳಲ್ಲಿನ ಬದಲಾವಣೆ ಇತ್ಯಾದಿ ಚಟುವಟಿಕೆಗಳು ಪ್ರತಿವರ್ಷ ನಿರ್ದಿಷ್ಟ ಕಾಲದಲ್ಲಿ ಅತ್ಯಂತ ನಿಯತವಾಗಿ ನಡೆಯುತ್ತವೆ. ಪ್ರಾಣಿಗಳನ್ನು ಸೆರೆ ಹಿಡಿದು ಹಗಲಿನ ಉದ್ದದಲ್ಲಿ ಕೃತಕವಾಗಿ ಏರಿಳಿತಗಳನ್ನು ಮಾಡಿದರೆ ವಲಸೆ, ಸಂತಾನೋತ್ಪತ್ತಿ ಮತ್ತಿತರ ಚಟುವಟಿಕೆಗಳು ಯಾವುದೇ ಋತುವಿನಲ್ಲಿಯೂ ನಡೆಯುವಂತೆ ಮಾಡಬಹುದು. 

	ಸಾಮಾನ್ಯವಾಗಿ ಬೇಸಗೆಯಲ್ಲಿ ಹಕ್ಕಿಗಳು ಉತ್ತರಾಭಿಮುಖವಾಗಿ ವಲಸೆ ಹೋಗುವ ಮುನ್ನ ಅವುಗಳಲ್ಲಿ ಕೆಲವು ದೈಹಿಕ ಬದಲಾವಣೆಗಳಾಗುತ್ತವೆ. ಜನನಾಂಗಗಳ ಉತ್ತೇಜಿತ ಚಟುವಟಿಕೆ, ದೇಹದಲ್ಲಿ ಕೊಬ್ಬು ಸಂಗ್ರಹ ಇತ್ಯಾದಿ. ಹಗಲಿನ ಅವಧಿಯನ್ನು ಕೃತಕವಾಗಿ ಹೆಚ್ಚಿಸುವುದರ ಮೂಲಕ ಪ್ರಾಯೋಗಿಕವಾಗಿ ಈ ಬದಲಾವಣೆಗಳನ್ನು ಉಂಟು ಮಾಡಿದರೆ ಹಕ್ಕಿಗಳು ಚಳಿಗಾಲದಲ್ಲಿಯೇ ವಲಸೆ ಹೊರಟುಬಿಡುತ್ತವೆ. ದೈಹಿಕ ಬದಲಾವಣೆಗಳ ಪ್ರಮಾಣ ದಿನವೂ ಪಡೆಯುವ ಬೆಳಕಿನ ಪ್ರಮಾಣವನ್ನು ಅವಲಂಬಿಸಿದೆ ಎಂಬುದು ಸ್ಪಷ್ಟ. ದಿನಕ್ಕೆ 9 ಗಂಟೆಗಳ ಬೆಳಕಿದ್ದರೂ ಸಾಕು.

	ಬಹುಪಾಲು ಪಕ್ಷಿ, ಸ್ತನಿ ಹಾಗೂ ಇತರ ಕಶೇರುಕಗಳಲ್ಲಿ ಸಂಭೋಗ ಕ್ರಿಯೆ ಋತುವಿಗೆ ನಿಯತವಾದದ್ದು. ಪ್ರಾಯೋಗಿಕವಾಗಿ ಹಗಲಿನ ಅವಧಿಯನ್ನು ನಿಯಂತ್ರಣಗೊಳಿಸುವುದರಿಂದ ಯಾವುದೇ ಋತುವಿನಲ್ಲಿ ಪ್ರಜನನ ಚಟುವಟಿಕೆಯನ್ನು ಉಂಟುಮಾಡಬಹುದು. ಪ್ರಾಣಿಗಳ ಕಣ್ಣನ್ನು ಅಥವಾ ಕಣ್ಣಿನ ಸಮೀಪದ ಮಿದುಳು ಭಾಗವನ್ನು ಬೆಳಕು ಪ್ರಚೋದಿಸುತ್ತದೆ. ಈ ಪ್ರಚೋದನೆಯಿಂದ ವಿಶೇಷ ಹಾರ್ಮೋನುಗಳ ಮಿದುಳಿನಿಂದ ಪ್ರವಹಿಸಿ ಪಿಟ್ಯುಟರಿ ಗ್ರಂಥಿಯನ್ನು ತಲಪಿ, ಪ್ರಜನನಾಂಗಗಳನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಅದು ಸ್ರವಿಸುವಂತೆ ಮಾಡುವುವು. ಸಾಮಾನ್ಯವಾಗಿ ಮಳೆಗಾಲದಲ್ಲಿ ಸಂಭೋಗಿಸುವ ಜಿಂಕೆ, ಕುರಿ, ಮೇಕೆ ಮೊದಲಾದ ಪ್ರಾಣಗಳಿಗೆ ಕಡಿಮೆಯಾಗುತ್ತಿರುವ ಹಗಲ ಅವಧಿ ಪರಿಣಾಮಕಾರಿ. ಬೇಸಿಗೆಯಲ್ಲಿ ಸಂಭೋಗಿಸುವ ಪ್ರಾಣಗಳಿಗೆ ದೀರ್ಘ ಹಗಲ ಅವಧಿ ಪರಿಣಾಮಕಾರಿ. ದಕ್ಷಿಣಾರ್ಧಗೋಳದ ಪ್ರಾಣಿಗಳನ್ನು, ಉತ್ತರಾರ್ಧಗೋಳಕ್ಕೆ ಒಯ್ದರೆ ಅವುಗಳ ಸಂಭೋಗದ ಶ್ರಾಯಗಳಲ್ಲಿ ಬದಲಾಣೆಗಳುಂಟಾಗುತ್ತವೆ. 

	ಎದ್ದು ಕಾಣುವ ಶ್ರಾಯಿಕ ಬದಲಾವಣೆ ಎಂದರೆ ಕೆಲವು ಬಗೆಯ ಸ್ತನಿ ಹಾಗೂ ಹಕ್ಕಿಗಳಲ್ಲಿ ತುಪ್ಪಳ ಹಾಗೂ ರೆಕ್ಕೆಪುಕ್ಕಗಳಲ್ಲಿನ ಬದಲಾವಣೆ. ಮಳೆಗಾಲದಲ್ಲಿ ಬೆಳ್ಳಗಿರುವ ಪ್ರಾಣಿಗಳು ವಸಂತ ಹಾಗೂ ಬೇಸಗೆ ಕಾಲದಲ್ಲಿ ಕಂದು ವರ್ಣಕ್ಕೆ ತಿರುಗುತ್ತವೆ. ಬೆಳಕಿನ ಪ್ರಾಯೋಗಿಕ ನಿಯಂತ್ರಣದಿಂದ ಯಾವುದೇ ಕಾಲದಲ್ಲಿ ಈ ಪರಿವರ್ತನೆಯನ್ನು ಉಂಟುಮಾಡಬಹುದು. 
ಹಕ್ಕಿಗಳಲ್ಲಿ ವಾರ್ಷಿಕ ಪುಕ್ಕ ಉದುರುವಿಕೆ, ಕುರಿಗಳಲ್ಲಿ ತುಪ್ಪಳ ಬೆಳವಣಿಗೆ ಮತ್ತು ಮಿಂಕ್ ಹಾಗೂ ಫೆರೆಟ್ ಪ್ರಾಣಿಗಳಲ್ಲಿ ಚಳಿಗಾಲದ ಹೊರ ಚರ್ಮದ ಬೆಳವಣಿಗೆ ಮೊದಲಾದುವುಗಳ ಮೇಲೆ ಕೂಡ ಹಗಲಿನ ಅವಧಿ ಪ್ರಭಾವ ಬೀರುತ್ತದೆ.

ಕೆಲವು ಜಾತಿಯ ಏಫಿಡು (ಗಿಡಹೇನು) ಗಳಲ್ಲಿ ರೆಕ್ಕೆ ಇರುವ ಪ್ರಾಣಿಗಳು ಹುಟ್ಟುವುದು ಸಾಮಾನ್ಯವಾಗಿ ಶರತ್ಕಾಲದಲ್ಲಿ. ಅಂದರೆ ಇದಕ್ಕೆ 12 ರಿಂದ 14 ಗಂಟೆಗಳ ವರೆಗಿನ ಸತತ ಕತ್ತಲೆಯ ಅವಧಿ ಅಗತ್ಯವಾಗಿ ಬೇಕಾಗುತ್ತದೆ. ಇನ್ನು ಕೆಲವು ಕೀಟಗಳಲ್ಲಿ ಲೈಂಗಿಕ ರೀತಿಯ ಪ್ರಜನನ ಕ್ರಿಯೆಯಲ್ಲಿ ತೊಡಗುವ ಕೀಟಗಳ ಉತ್ಪತ್ತಿ ಸಾಮಾನ್ಯವಾಗಿ ಶರತ್ಕಾಲದಲ್ಲಿ ಆಗುತ್ತವೆ. ಹಗಲಿನ ಅವಧಿಯನ್ನು ಕಡಿಮೆ ಮಾಡವುದರ ಮೂಲಕ ಈ ಬಗೆಯ ಕೀಟಗಳನ್ನು ಯಾವುದೇ ಕಾಲದಲ್ಲಿ ಪಡೆಯಬಹುದು.

ಪ್ರಕಾಶಾವಧಿ ಪ್ರಭಾವದ ಜ್ಞಾನವನ್ನು ಬಳಸಿಕೊಂಡು ತಾಂತ್ರಿಕವಾಗಿ ಲಾಭ ಪಡೆಯುತ್ತಿರುವುದು ಕೋಳಿ ಸಾಕಣೆ ಕ್ಷೇತ್ರದಲ್ಲಿ. ಏಕೆಂದರೆ ಹಗಲಿನ ಬೆಳಕಿನ ಅವಧಿ ಕೋಳಿಯ ದೇಹತೂಕ, ಮೊಟ್ಟೆ ಇಡುವಿಕೆ ಹಾಗೂ ವೀರ್ಯೋೀತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ. 
										(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ